ದಲಾಯಿ ಲಾಮಾ
 	1935- . ಟಿಬೆಟ್ಟಿನ ಬೌದ್ಧರ ದ್ಗೆ-ಲುಗ್ಸ್-ಪ ಅಥವಾ ಹಳದಿ ತಲೆಯುಡಿಗೆಯ ಸನ್ಯಾಸಿ ವರ್ಗದ ಅಧಿಪತಿ. ಲಾವಹಾ ಲಾಮಾ, ಮಹಾ ಸನ್ಯಾಸಿ. 1959ರ ವರೆಗೆ ಟಿಬೆಟ್ಟಿನ ಧಾರ್ಮಿಕ ಹಾಗೂ ಲೌಕಿಕ ಪ್ರಭು.

	ದಲಾಯಿ ಲಾಮಾ ಪರಂಪರೆ 15ನೆಯ ಶತಮಾನದಲ್ಲಿ ಆರಂಭವಾಗುತ್ತದೆ. ಮಧ್ಯ ಟಿಬೆಟ್ಟಿನ ತಷಿಲುನ್‍ಪೊ ಮಠದ ದ್ಗೆ-ಮನ್-ಗ್ರುಬ್-ಪ (1391-1475) ಪ್ರಥಮ ಅಧಿಪತಿ. ಲಾಮಾಗಳು ಮತ್ತೆ ಮತ್ತೆ ಅವತಾರವೆತ್ತಿ ಬರುತ್ತಾರೆಂಬ ನಂಬಿಕೆ 14ನೆಯ ಶತಮಾನದಲ್ಲಿ ಮೂಡತೊಡಗಿತ್ತು. ಮೇಲೆ ಹೇಳಿದ ಪ್ರಥಮ ಅಧಿಪತಿಯ ಅನಂತರ ಅವನ ಸ್ಥಾನಕ್ಕೆ ಬರುವವರು ಅವನ ಪುನರ್ಜನ್ಮಗಳೆಂದು. ಅವರೆಲ್ಲ ಬೋಧಿಸತ್ತ್ವ ಅವಲೋಕಿತೇಶ್ವರನ ಅವತಾರಗಳೇ ಎಂದು, ನಂಬಿಕೆಯಾಗಿತ್ತು. ಈ ಸನ್ಯಾಸಿ ವರ್ಗದ ಎರಡನೆಯ ಅಧಿಪತಿ ದ್ಗೆ-ದುನ್-ಗ್ರ್ಯಾ-ಮ್‍ಟ್ಷೊ (1475-1542). ಈತ ಲಾಸಾದ ಹೊರವಲಯದಲ್ಲಿದ್ದ ಬ್ರಾಸ್-ಸ್ಪಂಗ್ಸ್ ಅಥವಾ ದ್ರೆಪಂಗ್ ಮಠದ ಅಧಿಪತಿಯಾದ. ಇದೇ ಈ ಪರಂಪರೆಯ ಮಹಾ ಸನ್ಯಾಸಿಯ ಪೀಠವಾಯಿತು. ಈತನ ಅನಂತರ ಬಂದಾತ ಬ್ಸೋದ್-ನಾಮ್ಸ್-ಗ್ರ್ಯಾ-ಮ್‍ಟ್ಷೊ (1543-88). ಮಂಗೋಲ್ ಅಧಿಪತಿ ಅಲ್ತಾನ್ ಖಾನನ ಆಸ್ಥಾನಕ್ಕೆ ಈತ ಭೇಟಿ ಕೊಟ್ಟಿದ್ದಾಗ ಅವನು ಈತನಿಗೆ ತಾ-ಲೆ ಎಂಬ ಬಿರುದು ನೀಡಿದ. ಇದು ಇಂಗ್ಲಿಷಿನಲ್ಲಿ ದಲಾಯಿ ಎಂದಾಯಿತು. ತಾ-ಲೆ ಎಂಬುದು ಟಿಬೆಟನ್ ಭಾಷೆಯ ಗ್ರ್ಯಾ-ಮ್‍ಟ್ಷೊ ಎಂಬುದರ ಮಂಗೋಲಿಯನ್ ರೂಪಾಂತರ. ಹೀಗೆಂದರೆ `ಸಾಗರ ಎಂದು ಅರ್ಥ. ಈತ ಜ್ಞಾನಸಾಗರನೆಂದು ಜನರ ಭಾವನೆ. ಈ ಬಿರುದನ್ನು ಈತನ ಹಿಂದಿನವರಿಗೂ ಅನ್ವಯಿಸಲಾಯಿತು. ಟಿಬೆಟಿನರು ದಲಾಯಿ ಲಾಮಾನನ್ನು ಗ್ರ್ಯಾಲ್-ಬ-ರನ್-ಪೊ-ಚೆ ಎಂದು ಕರೆಯುತ್ತಾರೆ. ಹೀಗೆಂದರೆ ಮಹಾ ಅಮೂಲ್ಯ ವಿಜಯಿ.

	ನಾಲ್ಕನೆಯ ದಲಾಯಿ ಲಾಮಾ ಯಾನ್-ಟಾನ್-ಗ್ರ್ಯಾ-ಮ್‍ಟ್ಷೊ (1589-1617). ಅಲ್ತಾನ್ ಖಾನನ ಮರಿಮಗ. ದಲಾಯಿ ಲಾಮಾಗಳ ಪೈಕಿ ಟಿಬೆಟನಲ್ಲದವನು ಇವನೊಬ್ಬನೇ. ಇವನ ಅನಂತರ ಬಂದವನು ನ್ಗಾಗ್-ದ್ಬಾಂಗ್-ಗ್ರ್ಯಾ-ಮ್‍ಟ್ಷೊ (1617-82). ಇವನು ಮಂಗೋಲರ ಬೆಂಬಲದಿಂದ ತನ್ನ ಸ್ಪರ್ಧಿಗಳಿಗಿಂತ ಹೆಚ್ಚಿನ ಪ್ರಾಬಲ್ಯ ಗಳಿಸಿ ಟಿಬೆಟಿನ ಲೌಕಿಕ ಪ್ರಭುವಾದ. ಲಾಸಾದಲ್ಲಿ ದಲಾಯಿ ಲಾಮಾಗಳಿಗಾಗಿ ಪೊಟಾಲ ಅರಮನೆ ಕಟ್ಟಿಸಿದಾತ ಇವನೇ. ಇವನು `ಮಹಾಪಂಚಮನೆಂದು ಪ್ರಸಿದ್ಧನಾಗಿದ್ದಾನೆ. ಆರನೆಯ ದಲಾಯಿ ಲಾಮಾ ಟ್ಷಾಂಗ್ಸ್-ದ್‍ಬ್ಯಾಂಗ್ಸ್-ಗ್ರ್ಯಾ-ಮ್‍ಟ್ಷೊ (1683-1706). ಇವನು ರಮ್ಯಗೀತೆಗಳನ್ನು ಬರೆಯುತ್ತಿದ್ದ. ಆ ಪೀಠಕ್ಕೆ ತಕ್ಕುದಲ್ಲದ ರೀತಿ ವರ್ತಿಸುತ್ತಿದ್ದ. ಮಂಗೋಲರು ಇವನನ್ನು ಪೀಠದಿಂದ ಇಳಿಸಿದರು. ಇವನನ್ನು ಸೆರೆಹಿಡಿದು ಚೀನಕ್ಕೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯದಲ್ಲಿ ಈತ ತೀರಿಕೊಂಡ. ಏಳನೆಯವನಾದ ಬ್‍ಸ್ಕಾಲ್-ಬ್‍ಜಾಂಗ್-ಗ್ರ್ಯಾ-ಮ್‍ಟ್ಷೊ (1758-1804). ಇವನ ಕಾಲದಲ್ಲಿ ನೇಪಾಳದ ಗೂರ್ಖರು ಟಿಬೆಟ್ಟಿನ ಆಕ್ರಮಣ ನಡೆಸಿದರು. ಮುಂದಿನ ನಾಲ್ವರು ದಲಾಯಿ ಲಾಮಾಗಳು ಚಿಕ್ಕಂದಿನಲ್ಲೇ ತೀರಿಕೊಂಡರು. ಹದಿಮೂರನೆಯ ದಲಾಯಿ ಲಾಮಾ ತಬ್-ಬ್‍ಸ್ಟಾನ್-ಗ್ರ್ಯಾ-ಮ್‍ಟ್ಷೊ	(1875-1933). ಈತ ಬಲಿಷ್ಠನಾಗಿ ಸ್ವತಂತ್ರನಾಗಿ ಆಳಿದ.

	ಈಗಿನ ದಲಾಯಿ ಲಾಮಾ ಹದಿನಾಲ್ಕನೆಯವರು. ಬ್‍ಸ್ಟಾನ್-ಡ್‍ಜಿûನ್-ಗ್ರ್ಯಾ-ಮ್‍ಟ್ಷೊ ಎಂದು ಇವರ ನಾಮ. ಇವರು 1935ರ ಜುಲೈ 6ರಂದು ಚೀನದ ಜಿಂಗ್‍ಹೈ ಪ್ರಾಂತ್ಯದ ಟಕಸ್ಮಾರದಲ್ಲಿ ಟಿಬೆಟನ್ ತಾಯಿತಂದೆಯರಿಗೆ ಜನಿಸಿದರು. ಇವರು ಪಟ್ಟಾಭಿಷಿಕ್ತರಾದ್ದು 1940ರಲ್ಲಿ. 1950ರವರೆಗೆ ಪ್ರತಿನಿಧಿ ಆಡಳಿತವಿತ್ತು. 1950ರಲ್ಲಿ ಇವರು ಆಡಳಿತ ಸೂತ್ರ ವಹಿಸಿಕೊಂಡರು. ಆ ವರ್ಷ ಚೀನೀ ಜನತಾ ಗಣ ರಾಜ್ಯ ಟಿಬೆಟ್ಟಿನ ಮೇಲೆ ತನ್ನ ಪರಮಾಧಿಕಾರ ಸ್ಥಾಪಿಸಿತು. ದಲಾಯಿ ಲಾಮಾ ಇದನ್ನು ಪ್ರತಿಭಟಿಸಿದರು. ಆದರೆ ಪ್ರತಿಭಟನೆ ವಿಫಲಗೊಂಡಿತು. ದಲಾಯಿ ಲಾಮಾ ದಕ್ಷಿಣ ಟಿಬೆಟ್ಟಿನ ಚುಂಬಿಗೆ ಪಲಾಯನ ಮಾಡಿದರು. 1951ರಲ್ಲಿ ಚೀನದೊಂದಿಗೆ ಸಂಧಾನ ಮಾಡಿಕೊಂಡರು. 1951-59ರಲ್ಲಿ ಅವರು ರಾಷ್ಟ್ರೀಯ ಸಮಿತಿಯ ಸದಸ್ಯರೂ 1953-59ರಲ್ಲಿ ಚೀನೀ ಬೌದ್ಧ ಸಂಘದ ಗೌರವಾಧ್ಯಕ್ಷರೂ ಆಗಿದ್ದರು. ಟಿಬೆಟ್ ಸ್ವಯಂಮಾಡಳಿತ ಪ್ರದೇಶದ ಸಿದ್ಧತಾ ಸಮಿತಿಯ ಅಧ್ಯಕ್ಷರಾಗಿದ್ದುದು 1955-59ರಲ್ಲಿ ಇವರಿಗೆ 1959ರಲ್ಲಿ ಬೌದ್ಧದರ್ಶನದ ಡಾಕ್ಟರ್ ಪದವಿ ಪ್ರಾಪ್ತವಾಯಿತು. ಚೀನದ ವಿರುದ್ಧ ಟಿಬೆಟ್ಟಿನಲ್ಲಿ ಎದ್ದ ದಂಗೆಯನ್ನು ಬೀಜಿಂಗ್ ಸರ್ಕಾರ ಅಡಗಿಸಿತು. ದಲಾಯಿ ಲಾಮಾ ಅಲ್ಲಿಂದ ತಪ್ಪಿಸಿಕೊಂಡು ಭಾರತಕ್ಕೆ ಬಂದರು (1959). ಹಿಮಾಚಲ ಪ್ರದೇಶದ ಕಾಂಗಡಾ ಜಿಲ್ಲೆಯ ಧರ್ಮಶಾಲಾ ಕಂಟೋನ್ಮೆಂಟಿನಲ್ಲಿ ಇವರ ಈಗಿನ ಬಿಡಾರ. ಇವರಿಗೆ 1989ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿತು. ಮೈ ಲ್ಯಾಂಡ್ ಅಂಡ್ ಪೀಪ್‍ಲ್ (1962), ಲೋಸಾರ್ ಮಿಗ್‍ಜೆ (ಜ್ಞಾನ ಚಕ್ಷುವಿನ ಉನ್ಮೀಲನ) (1963), ಉಮಾಯ್ ಧೆಮಿಂಗ್ (ಮಧ್ಯಮಾರ್ಗೋಪಾಯ) (1971)-ಇವು ದಲಾಯಿಲಾಮಾ ಬರೆದಿರುವ ಕೃತಿಗಳು. 		(ಎಸ್.ಆರ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ